ಆಗೇರರು
ಕರ್ನಾಟಕ ರಾಜ್ಯದಲ್ಲಿ ಉತ್ತರ ಕನ್ನಡ ಜಿಲ್ಲೆ ಭೌಗೋಳಿಕವಾಗಿ ತುಂಬ ವೈಶಿಷ್ಟ್ಯಪೂರ್ಣವಾದದ್ದು. ಕಡಲತೀರದ ಕರಾವಳಿ ಪ್ರದೇಶ, ಸೈಹಾದ್ರಿ ಬೆಟ್ಟ ಸಾಲುಗಳಿಂದ ಆವ್ರತವಾದ ಘಟ್ಟಪ್ರದೇಶ ಮತ್ತು ಅಲ್ಲಿಂದ ಮುಂದುವರಿದ ಬಯಲು ಪ್ರದೇಶಗಳಿಂದ ಸಮೃದ್ಧವಾದ ನಿಸರ್ಗ ಸಂಪತ್ತಿನ ನೆಲೆ ಇದು.
ಭೌಗೋಳಿಕ ವೈಶಿಷ್ಟ್ಯಗಳೊಂದಿಗೆ ಇಲ್ಲಿಯ ಜನಾಂಗೀಯ ವೈಶಿಷ್ಟ್ಯವೂ ಗಮನಾರ್ಹವಾದುದು. ಕರಾವಳಿಗುಂಟ ವಾಸಿಸುವ ಅಂಬಿಗ, ಖಾರ್ವಿ, ಗಾಬಿತ, ಹರಿಕಂತ, ದಾಲ್ಜಿ ಮುಂತಾದ ಮೀನುಗಾರರು, ನಾಡವ, ನಾಮಧಾರಿ, ಕೋಮಾರಪಂಥ, ಹಾಲಕ್ಕಿ, ಪಟಗಾರ ಮೊದಲಾದ ಕೃಷಿಕರು, ಗಾಣಿಗರು, ವಾಣೇರು ಇತ್ಯಾದಿ ವೈಶ್ಯರು, ಹವ್ಯಕ, ದೈವಜ್ಞ, ಬ್ರಾಹ್ಮಣ, ಗೌಡ ಸಾರಸ್ವತ, ಹೆಗಡೆ ಮೊದಲಾದ ಬ್ರಾಹ್ಮಣ ಸಮುದಾಯದವರು, ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದವರು, ಹೊಲೆಯರು, ಭಂಗಿಗಳು, ಚಮಗಾರರು, ಹಳ್ಳೇರು, ಮುಕ್ರಿ, ಆಗೇರ ಮುಂತಾದ ದಲಿತ ಸಮುದಾಯದವರು ಈ ಜಿಲ್ಲೆಯಲ್ಲಿ ನೆಲೆಸಿದ್ದಾರೆ. ಪ್ರತಿಯೊಂದು ಜನಾಂಗವೂ ಭಾಷೆ, ಸಂಸ್ಕೃತಿ, ಆಚರಣೆ, ನಂಬಿಕೆ, ಜನಪದ ಸಾಹಿತ್ಯ, ಕಲೆ ಇತ್ಯಾದಿ ಕ್ಷೇತ್ರಗಳಲ್ಲಿ ತಮ್ಮದೇ ವೈಶಿಷ್ಟ್ಯಗಳನ್ನು ಕಾಪಾಡಿಕೊಂಡು ಸೌಹಾರ್ದಯುತವಾಗಿ ಬಾಳುವೆ ನಡೆಸುತ್ತಿವೆ.
ಜಿಲ್ಲೆಯ ದಲಿತ ಸಮುದಾಯದಲ್ಲಿ ‘ಆಗೇರರು’ ಅಲ್ಪಸಂಖ್ಯಾತರಾದರೂ ಭಾಷೆ ಮತ್ತು ಸಾಂಸ್ಕೃತಿಕ ಅನನ್ಯತೆಯಿಂದ ಗಮನ ಸೆಳೆಯುತ್ತಾರೆ. ಕೆನರಾ ಗೆಝೆಟಯರ್‌ನಲ್ಲಿ Ager’s are salt makers in the salt pan ಎಂಬ ಪ್ರಸ್ತಾಪವಿದೆ. ಉಪ್ಪಿನ ಆಗರಗಳಲ್ಲಿ ಉಪ್ಪು ತೆಗೆಯುವುದೇ ಇವರ ಮುಖ್ಯ ಉದ್ಯೋಗವಾದುದರಿಂದ ಇವರನ್ನು ಆಗೇರರು ಎಂದು ಕರೆಯಲಾಗಿದೆ. ಈ ಜಿಲ್ಲೆಯಲ್ಲಿ ವಾಸಿಸುವ ದಲಿತ ಸಮುದಾಯದ ಇತರ ಜನಾಂಗಗಳಾದ ಹಳ್ಳೇರು, ಮುಕ್ರಿಯರೊಡನೆ ಹೋಲಿಸಿದರೆ ದೈಹಿಕ ಚರ್ಯೆ ಮತ್ತು ವೇಷಭೂಷಣಗಳಲ್ಲಿ ಸಮಾನತೆ ಕಂಡುಬರುತ್ತದೆ. ಆದರೆ ಸಾಮಾಜಿಕ ಬದುಕು ಮತ್ತು ಆಚಾರ ವಿಚಾರಗಳಲ್ಲಿ ಸೂಕ್ಷ್ಮವಾದ ವ್ಯತ್ಯಾಸಗಳಿರುವುದನ್ನು ಗುರುತಿಸಬಹುದಾಗಿದೆ.
ಆಗೇರರ ಮೂಲದ ಕುರಿತು ಸಂಶೋಧಕರಲ್ಲಿ ಹಲವು ಅಭಿಪ್ರಾಯಗಳಿವೆ. ಗುಜುರಾತ ಕರಾವಳಿಯಲ್ಲಿ ಉಪ್ಪಿನ ಆಗರಗಳಲ್ಲಿ ಉಪ್ಪು ತೆಗೆಯುವ ವೃತ್ತಿಯಲ್ಲಿರುವ ‘ಅಗರ್ಸ್’ ಎಂಬ ಜನಾಂಗದ ಒಂದು ಗುಂಪು ಉತ್ತರ ಕನ್ನಡದ ಕರಾವಳಿಗೆ ವಲಸೆ ಬಂದು ಇಲ್ಲಿಯೇ ನೆಲೆಸಿ ಉಪ್ಪು ತೆಗೆಯುವ ಕಾಯಕ ಆರಂಭಿಸಿದರು ಎಂಬುದು ಒಂದು ಅಭಿಪ್ರಾಯ. ಅಗರ್ಸ್ ಜನಾಂಗದ ದೈಹಿಕ ಚರ್ಯೆಯೂ ಆಗೇರರ ದೈಹಿಕ ಚರ್ಯೆಗೆ ಹೋಲಿಕೆಯಾಗುವುದರಿಂದ ಈ ಊಹೆ ನಿಜವೂ ಅನಿಸುತ್ತದೆ. ಆದರೆ ಇನ್ನೊಂದು ಅಭಿಪ್ರಾಯದಂತೆ ಆಗೇರರು ದಕ್ಷಿಣ ಕನ್ನಡ ಜಿಲ್ಲೆಯಿಂದ ಇಲ್ಲಿಗೆ ವಲಸೆ ಬಂದವರು ಎಂದು ಹೇಳಲಾಗುತ್ತಿದೆ.
ದಕ್ಷಿಣ ಕನ್ನಡದ ಕೂಸಾಳು ಹೊಲೆಯರ ಗುಂಪೊಂದು ಕೃಷಿ ಕೂಲಿಗಾಗಿ ಈ ಜಿಲ್ಲೆಗೆ ವಲಸೆ ಬಂದಿದ್ದು, ಇಲ್ಲಿ ನಾಡವರ ಹೊಲದಲ್ಲಿ ಕೃಷಿ ಕೂಲಿ ಮತ್ತು ದನ ಕಾಯುವ ಕೆಲಸ ಮಾಡುತ್ತ ಇಲ್ಲಿ ಜೀವನ ನಿರ್ವಹಣೆ ಮಾಡತೊಡಗಿದರು. ಆಗ ಅವರನ್ನು ‘ಗೋವಳರು’ ಎಂದು ಕರೆಯಲಾಗುತ್ತಿತ್ತು. ಮುಂದೆ ಇವರು ಸಾಣಿಕಟ್ಟಾ ಮೊದಲಾದ ಕಡೆಗಳಲ್ಲಿ ಉಪ್ಪಿನ ಆಗರಗಳಲ್ಲಿ ಉಪ್ಪು ತೆಗೆಯಲು ಆರಂಭಿಸಿದ ಬಳಿಕ ಆಗರಗಳಲ್ಲಿ ದುಡಿಯುವುದರಿಂದಲೇ ‘ಆಗೇರರು’ ಎಂದು ಕರೆಯಿಸಿಕೊಂಡರು ಎಂದು ಹೇಳಲಾಗುತ್ತಿದೆ. ಆಗೇರರ ಸಾಂಸ್ಕೃತಿಕ ಬದುಕನ್ನು ಅವಲೋಕಿಸಿದರೆ ಎರಡನೆಯ ಅಭಿಪ್ರಾಯವೇ ಸತ್ಯಕ್ಕೆ ಹತ್ತಿರವಾದುದು ಅನಿಸುತ್ತದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಕುಮಟಾ ಮತ್ತು ಕಾರವಾರ ತಾಲೂಕಿನ ಹಳ್ಳಿಗಳಲ್ಲಿ ಮಾತ್ರ ಆಗೇರರ ವಾಸ್ತವ್ಯದ ನೆಲೆಗಳು ಕಾಣಿಸುತ್ತವೆ. ಆಗೇರರ ಒಟ್ಟೂ ಜನಸಂಖ್ಯೆ ಸುಮಾರು ಇಪ್ಪತ್ತರಿಂದ ಇಪ್ಪತ್ತೆರಡು ಸಾವಿರಷ್ಟಿದೆ. ಸ್ವಂತ ಜಮೀನು ಹೊಂದಿದ ಕುಟುಂಬಗಳು ತೀರ ಇತ್ತೀಚಿನವರೆಗೂ ಇರಲಿಲ್ಲ. ಬಹುತೇಕ ಕುಟುಂಬಗಳು ನಾಡವರ ಮತ್ತು ಸಾರಸ್ವತರ ಜಮೀನಿನಲ್ಲಿ ಆಶ್ರಯ ಪಡೆದಿದ್ದವು. ಸರಕಾರ ನಿವೇಶನ ಮತ್ತು ಮನೆ ನೀಡಿದ ಬಳಿಕ ಅವರು ಸ್ವತಂತ್ರವಾಗಿ ಬದುಕುತ್ತಿದ್ದಾರೆ. ಕೆಲವರು ಬೇಸಾಯದ ಭೂಮಿಯನ್ನು ಪಡೆದುಕೊಂಡಿದ್ದಾರೆ. ಉಪ್ಪಿನಾಗರದ ಕೂಲಿ, ಕೃಷಿಕೂಲಿ ಮತ್ತು ಕಲ್ಲುಗಣಿಗಳಲ್ಲಿ ಕಲ್ಲುಗಳನ್ನು ಕಡಿದು ತೆಗೆಯುವುದು ಆಗೇರರ ಮುಖ್ಯ ಉದ್ಯೋಗಗಳು.